ಬಾಲ್ಡ್‍ವಿನ್, ಸ್ಟೇನ್‍ಲೀ
1867-1947. ಬ್ರಿಟಿಷ್ ರಾಜನೀತಿಜ್ಞ ಮತ್ತು ಬ್ರಿಟನ್ನಿನ ಪ್ರಧಾನಿ. 1867 ಆಗಸ್ಟ್ 3ರಂದು ಬ್ಯೂಡ್ಲೆ ಎಂಬಲ್ಲಿ ಜನಿಸಿದ. ತಂದೆ ಪ್ರಮುಖ ಕೈಗಾರಿಕೋದ್ಯಮಿ ಆಲ್‍ಫ್ರೆಡ್ ಬಾಲ್ಡ್‍ವಿನ್. ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿಗೆ ಸೇರಿ 1888ರಲ್ಲಿ ಬಿ.ಎ. ಪದವಿಗಳಿಸಿದ ಅನಂತರ ತಂದೆಗೆ ವ್ಯವಹಾರಗಳಲ್ಲಿ ಸಹಾಯಕನಾದ. 1829ರಲ್ಲಿ ಈತನ ತಂದೆ ಶಾಸನ ಸಭೆಯ ಸದಸ್ಯನಾದ ಮೇಲೆ ಆತನ ವ್ಯವಹಾರಗಳನ್ನೆಲ್ಲ ಸ್ಟೇನ್‍ಲೀ ನೋಡಿಕೊಳ್ಳಬೇಕಾಯಿತು. ಸುಮಾರು ಎರಡು ದಶಕಗಳ ಕಾಲ ಈತನ ಗಮನವೆಲ್ಲ ವ್ಯಾಪಾರ ವ್ಯವಹಾರಗಳ ಮೇಲಿತ್ತು. ರಾಜಕೀಯ ಪ್ರವೇಶಿಸಲು ಬಯಸಿ 1906ರಲ್ಲೊಮ್ಮೆ ಸ್ಪರ್ಧಿಸಿ ಸೋತ. 1908ರಲ್ಲಿ ಈತನ ತಂದೆ ಮರಣ ಹೊಂದಿದ. ಅನಂತರ ಸ್ಟೇನ್‍ಲೀ ವೊಸ್ಟರ್‍ಷೈರಿನ ಬ್ಯೂಡ್ಲೆ ವಿಭಾಗವನ್ನು ಪ್ರತಿನಿಧಿಸಿದ. 1908 ಮಾರ್ಚ್ 3ರಂದು ಶಾಸನಸಭಾಸದಸ್ಯನಾದ. 1916ರಲ್ಲಿ ಬೋನಾರ್ ಲಾ ಈತನನ್ನು ಶಾಸನಸಭಾ ಆಪ್ತಕಾರ್ಯದರ್ಶಿಯಾಗಿ ನೇಮಕ ಮಾಡಿದ. 1917 ಜೂನ್‍ನಲ್ಲಿ ಜಂಟಿ ಆರ್ಥಿಕ ಕಾರ್ಯದರ್ಶಿಯಾದ. 1920ರಲ್ಲಿ ಪ್ರಿವಿಕೌನ್ಸಿಲ್‍ಗೆ ಪ್ರವೇಶ 1921ರಲ್ಲಿ ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಿ ಸಂಪುಟದಲ್ಲಿ ನೇಮಕ. ಮುಂದೆ 1922ರಲ್ಲಿ ಅರ್ಥ ಸಚಿವನಾದ.

ಮಹಾಯುದ್ಧದ ಸಾಲದ ಬಾಕಿಯ ಬಗ್ಗೆ ಮಾತುಕತೆಗಾಗಿ ವಾಷಿಂಗ್‍ಟನ್ನಿಗೆ ಹೋದ. ಈತ ಅಲ್ಲಿ ಮಾಡಿಕೊಂಡು ಬಂದ ಒಪ್ಪಂದದ ವಿಷಯದಲ್ಲಿ ಟೀಕೆಗೆ ಗುರಿಯಾದ. 1923ರಲ್ಲಿ ಬೋನಾರ್ ಲಾ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಈತ ಪ್ರಧಾನಿಯಾದ. ಅನಂತರ ನಡೆದ ಚುನಾವಣೆಯಲ್ಲಿ ಕನ್ಸರ್‍ವೇಟಿವ್ ಪಕ್ಷ ಪರಾಭವಹೊಂದಿದರೂ ಮುಂದೆ ಒಂಭತ್ತು ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಈತನ ಪಕ್ಷ ಭಾರಿ ಜಯ ಗಳಿಸಿತು. ಈತ ಮತ್ತೆ ಪ್ರಧಾನಿಯಾಗಿ ವಿನ್‍ಸ್ಟನ್ ಚರ್ಚಿಲರನ್ನು ಅರ್ಥಖಾತೆಯಲ್ಲಿ ನೇಮಿಸಿದ. 1931ರಲ್ಲಿ ಲೇಬರ್ ಸರಕಾರದ ಪತನಾನಂತರ ಮ್ಯಾಕ್‍ಡೊನಾಲ್ಡನ ನೇತೃತ್ವದಲ್ಲಿ ರೂಪುಗೊಂಡ ರಾಷ್ಟ್ರೀಯ ಸರ್ಕಾರದಲ್ಲಿಯೂ ಸ್ಟೇನ್‍ಲೀ ಇದ್ದ. 1935ರಲ್ಲಿ ಮ್ಯಾಕ್‍ಡೊನಾಲ್ಡ್ ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದಿದಾಗ ಈತ ಮತ್ತೊಮ್ಮೆ ಪ್ರಧಾನಿಯಾದ. 1937 ಮೇ 28ರಂದು ಈತ ಪ್ರಧಾನಿಯ ಪಟ್ಟದಿಂದ ನಿವೃತ್ತನಾದ. ಅನಂತರ ರಾಷ್ಟ್ರೀಯ ಕ್ಷೇತ್ರದಲ್ಲಿ ಯಾವ ಪಾತ್ರವನ್ನೂ ವಹಿಸದೆ 1947 ಡಿಸೆಂಬರ್ 14ರಂದು ಮರಣ ಹೊಂದಿದ.

ಸಾಹಿತ್ಯಪ್ರಿಯ ಸ್ಟೇನ್‍ಲೀ ಕೆಲವು ಕೃತಿಗಳನ್ನೂ ರಚಿಸಿದ್ದಾನೆ. ಅವುಗಳಲ್ಲಿ ದಿಸ್ ಟಾರ್ಚ್ ಆಫ್ ಫ್ರೀಡಮ್ (1935). ಸರ್ವೀಸ್ ಆಫ್ ಅವರ್ ಲೈವ್ಸ್ (1937). ಎನ್ ಇಂಟರ್‍ಪ್ರಿಟರ್ ಆಫ್ ಇಂಗ್ಲೆಂಡ್ (1939) ಹಾಗೂ ಕ್ಲಾಸಿಕ್ಸ್ ಎಂಡ್ ದಿ ಪ್ಲೈನ್ ಮ್ಯಾನ್ (1926). ಇಂಗ್ಲೆಂಡ್ ಎಂಬವನ್ನು ಹೆಸರಿಸಬಹುದು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ